ಎಷ್ಟು ಸಮಯವಾಗಿಬಿಟ್ಟಿದೆಯಲ್ಲವೆ ಚಿನ್ನು ನಿನ್ನೊಟ್ಟಿಗೆ ಮಾತಾಡಿ, ಮತ್ತೆ ನಿನ್ನನ್ನು ನೋಡಿ ಮಾತಾಡುತ್ತೇನೋ ಇಲ್ಲವೋ. ಅದಕ್ಕೋಸ್ಕರ ಬರೆಯಲು ಕುಳಿತಿದ್ದೇನೆ, ಎಂದಾದರೊಂದು ದಿನ ಈ ಪತ್ರ ನಿನ್ನನ್ನು ಮುಟ್ಟಬೇಕೆಂಬ ಅಸೆ.
ನಿನ್ನ ನೋಡದೆ, ನಿನ್ನೊಂದಿಗೆ ಮಾತಾಡದೆ ಕಳೆದ ದಿನಗಳೇ ಇರುತ್ತಿರಲಿಲ್ಲ, ಆದರೀಗ ನೀನು ನನ್ನ ಅಗಲಿ ಹೋಗಿ ವರ್ಷವಾಗಿಬಿಟ್ಟಿದೆ. ಇಷ್ಟು ದಿನಗಳನ್ನು ಎದುರಿಸಿ ಇಂದು ಹೀಗೆ ಕುಳಿತು ಬರೆಯುತ್ತಿರುತ್ತೇನೆ ಎಂದು ನಂಬಿರಲಿಲ್ಲ. ನೀನಿಲ್ಲದೆ ಒಂದು ವಾರ ಕಳೆಯುತ್ತೇನೋ ಇಲ್ಲವೋ ಎಂಬ ಅನುಮಾನವಿತ್ತು. ಅನುಮಾನಕ್ಕೆ ಬಲವಾದ ಕಾರಣಗಳಿತ್ತು.
ನಿನ್ನ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ. ಖುಷಿಯಾದರೆ ಮೊದಲು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ, ದುಃಖವಾದರೆ ನಿನ್ನ ಮಡಿಲಲ್ಲಿ ಮಲಗಿ ಅಳುತ್ತಿದ್ದೆ. ನೀನು ಬಳಿಯಿದ್ದರೆ ನನ್ನ ಎಲ್ಲ ನೋವುಗಳನ್ನು ಮರೆಯುತ್ತಿದ್ದೆ. ಏನೇ ಆದರೂ ನೀನೊಬ್ಬಳಾದರೂ ನನ್ನೊಂದಿಗೆ ಯಾವಾಗಲೂ ಇರುತ್ತೀಯ ಎಂದು ನಂಬಿದ್ದೆ ಚಿನ್ನು. ಆ ನಂಬಿಕೆಯೇ ಜೀವಿಸುವ ಉತ್ಸಾಹ ತಂದುಕೊಟ್ಟಿದ್ದು. ನೀನು ಬಳಿಯಿದ್ದರೆ ನನಗೆ ಈ ಪ್ರಪಂಚ ಎಷ್ಟು ಚಂದವೆನಿಸುತ್ತಿತ್ತು ಗೊತ್ತೆ…
ಯಾವುದೋ ಕಾರಣಕ್ಕೆ ಅಚಾನಕ್ಕಾಗಿ ಒಂದು ದಿನ ದೂರಾಗಿಬಿಟ್ಟೆ. ನೀನು ಕೂಡ ನನ್ನನ್ನು ಬಿಟ್ಟು ಎಷ್ಟು ದಿನ ಇರಬಲ್ಲೆ? ಸ್ವಲ್ಪ ಸಮಯದ ನಂತರ ಬಂದೆ ಬರುತ್ತೀಯ ಎಂದು ನಂಬಿದ್ದೆ. ಆದರೀಗ ವರ್ಷವಾಗಿಬಿಟ್ಟಿದೆ. ನಿನಗೆ ನನ್ನ ನೆನಪೇ ಬರಲಿಲ್ಲವೆ ಚಿನ್ನು? ನನ್ನೊಂದಿಗೆ ಮಾತಾಡಬೇಕೆನಿಸಿಲ್ಲವೆ?
ನಿನ್ನ ಬಿಟ್ಟು ಇಷ್ಟು ದಿನ ಇರುತ್ತೇನೆಂದು ನಂಬಿರಲಿಲ್ಲ. ನೀನು ಹಿಂದಿರುಗಿ ಬಂದೇ ಬರುತ್ತೀಯ ಎಂಬ ಒಂದೇ ನಂಬಿಕೆಯೊಂದಿಗೆ ಬದುಕಿದ್ದೇನೆ. ನಿನ್ನ ಬರುವನ್ನೇ ಎದುರು ನೋಡುತ್ತಿದ್ದೇನೆ.
ಈ ನಂಬಿಕೆ ನನ್ನ ಹೃದಯವನ್ನು ಬಿಟ್ಟು ಹೋಗುವ ಮುನ್ನ ಬಂದುಬಿಡು ಚಿನ್ನು…..
