ಹಿಂದಿರುಗಿ ಬಂದುಬಿಡು ಚಿನ್ನು…..

ಅಕ್ಟೋಬರ್ 27, 2008

ಎಷ್ಟು ಸಮಯವಾಗಿಬಿಟ್ಟಿದೆಯಲ್ಲವೆ ಚಿನ್ನು ನಿನ್ನೊಟ್ಟಿಗೆ ಮಾತಾಡಿ, ಮತ್ತೆ ನಿನ್ನನ್ನು ನೋಡಿ ಮಾತಾಡುತ್ತೇನೋ ಇಲ್ಲವೋ. ಅದಕ್ಕೋಸ್ಕರ ಬರೆಯಲು ಕುಳಿತಿದ್ದೇನೆ, ಎಂದಾದರೊಂದು ದಿನ ಈ ಪತ್ರ ನಿನ್ನನ್ನು ಮುಟ್ಟಬೇಕೆಂಬ ಅಸೆ.
ನಿನ್ನ ನೋಡದೆ, ನಿನ್ನೊಂದಿಗೆ ಮಾತಾಡದೆ ಕಳೆದ ದಿನಗಳೇ ಇರುತ್ತಿರಲಿಲ್ಲ, ಆದರೀಗ ನೀನು ನನ್ನ ಅಗಲಿ ಹೋಗಿ ವರ್ಷವಾಗಿಬಿಟ್ಟಿದೆ. ಇಷ್ಟು ದಿನಗಳನ್ನು ಎದುರಿಸಿ ಇಂದು ಹೀಗೆ ಕುಳಿತು ಬರೆಯುತ್ತಿರುತ್ತೇನೆ ಎಂದು ನಂಬಿರಲಿಲ್ಲ. ನೀನಿಲ್ಲದೆ ಒಂದು ವಾರ ಕಳೆಯುತ್ತೇನೋ ಇಲ್ಲವೋ ಎಂಬ ಅನುಮಾನವಿತ್ತು. ಅನುಮಾನಕ್ಕೆ ಬಲವಾದ ಕಾರಣಗಳಿತ್ತು.
ನಿನ್ನ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ. ಖುಷಿಯಾದರೆ ಮೊದಲು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ, ದುಃಖವಾದರೆ ನಿನ್ನ ಮಡಿಲಲ್ಲಿ ಮಲಗಿ ಅಳುತ್ತಿದ್ದೆ. ನೀನು ಬಳಿಯಿದ್ದರೆ ನನ್ನ ಎಲ್ಲ ನೋವುಗಳನ್ನು ಮರೆಯುತ್ತಿದ್ದೆ. ಏನೇ ಆದರೂ ನೀನೊಬ್ಬಳಾದರೂ ನನ್ನೊಂದಿಗೆ ಯಾವಾಗಲೂ ಇರುತ್ತೀಯ ಎಂದು ನಂಬಿದ್ದೆ ಚಿನ್ನು. ಆ ನಂಬಿಕೆಯೇ ಜೀವಿಸುವ ಉತ್ಸಾಹ ತಂದುಕೊಟ್ಟಿದ್ದು. ನೀನು ಬಳಿಯಿದ್ದರೆ ನನಗೆ ಈ ಪ್ರಪಂಚ ಎಷ್ಟು ಚಂದವೆನಿಸುತ್ತಿತ್ತು ಗೊತ್ತೆ…
ಯಾವುದೋ ಕಾರಣಕ್ಕೆ ಅಚಾನಕ್ಕಾಗಿ ಒಂದು ದಿನ ದೂರಾಗಿಬಿಟ್ಟೆ. ನೀನು ಕೂಡ ನನ್ನನ್ನು ಬಿಟ್ಟು ಎಷ್ಟು ದಿನ ಇರಬಲ್ಲೆ? ಸ್ವಲ್ಪ ಸಮಯದ ನಂತರ ಬಂದೆ ಬರುತ್ತೀಯ ಎಂದು ನಂಬಿದ್ದೆ. ಆದರೀಗ ವರ್ಷವಾಗಿಬಿಟ್ಟಿದೆ. ನಿನಗೆ ನನ್ನ ನೆನಪೇ ಬರಲಿಲ್ಲವೆ ಚಿನ್ನು? ನನ್ನೊಂದಿಗೆ ಮಾತಾಡಬೇಕೆನಿಸಿಲ್ಲವೆ?
ನಿನ್ನ ಬಿಟ್ಟು ಇಷ್ಟು ದಿನ ಇರುತ್ತೇನೆಂದು ನಂಬಿರಲಿಲ್ಲ. ನೀನು ಹಿಂದಿರುಗಿ ಬಂದೇ ಬರುತ್ತೀಯ ಎಂಬ ಒಂದೇ ನಂಬಿಕೆಯೊಂದಿಗೆ ಬದುಕಿದ್ದೇನೆ. ನಿನ್ನ ಬರುವನ್ನೇ ಎದುರು ನೋಡುತ್ತಿದ್ದೇನೆ.
ಈ ನಂಬಿಕೆ ನನ್ನ ಹೃದಯವನ್ನು ಬಿಟ್ಟು ಹೋಗುವ ಮುನ್ನ ಬಂದುಬಿಡು ಚಿನ್ನು…..

ಮೋಡವೊಂದು ಪ್ರೀತಿಸಿದ ಬಗೆ…..

ಸೆಪ್ಟೆಂಬರ್ 21, 2008

ಮೆಡಿಟರೇನಿಯನ್ ಸಮುದ್ರದ ಒಂದು ಬಿರುಗಾಳಿಯ ಮಧ್ಯೆ ಒಂದು ಪುಟ್ಟ ಮೋಡ ಜನ್ಮಿಸಿತು, ಆದರೆ ಅಲ್ಲಿ ಬೆಳೆಯಲು ಅದಕ್ಕೆ ಅವಕಾಶ ಸಿಗಲಿಲ್ಲ. ಬಲವಾದ ಗಾಳಿಯೊಂದು ಎಲ್ಲಾ ಮೋಡಗಳನ್ನು ಆಫ್ರಿಕಾದೆಡೆಗೆ ದೂಡತೊಡಗಿತು.
ಮೋಡಗಳು ಆಫ್ರಿಕಾ ಖಂಡ ಮುಟ್ಟುತ್ತಿದ್ದಂತೆ ಹವಾಮಾನ ಬದಲಾಯಿತು. ಆಗಸದಲ್ಲಿ ಸೂರ್ಯ ಪ್ರಜ್ವಲಿಸತೊಡಗಿ ಕೆಳಗೆ ಬಂಗಾರದಂತೆ ಹಬ್ಬಿದ ಸಹಾರಾದ ಮರಳುಗಾಡು ಕಾಣತೊಡಗಿತು. ಮರಳುಗಾಡಿನಲ್ಲಿ ಮಳೆಯಾಗುವುದು ತೀರ ಅಪರೂಪವಾದ್ದರಿಂದ ಆ ಗಾಳಿ ಮೋಡಗಳನ್ನು ದಕ್ಷಿಣದ ಕಾಡಿನೆಡೆಗೆ ದೂಡಲು ಮುಂದುವರಿಯಿತು.
ಇದೇ ಸಮಯದಲ್ಲಿ, ಮಾನವರೂ ಕೆವವೊಮ್ಮೆ ಮಾಡುವಂತೆ, ಆ ಮೋಡ ತನ್ನ ತಂದೆ ತಾಯಿ ಸ್ನೇಹಿತರನ್ನೆಲ್ಲ ಬಿಟ್ಟು ಪ್ರಪಂಚ ಪರ್ಯಟನೆ ಮಾಡಲು ಹೊರಟಿತು. “ಏನು ಮಾಡುತ್ತಿರುವೆ?” ಎಂದಿತು ಗಾಳಿ. “ಮರುಳುಗಾಡು ಎಲ್ಲಿ ಹೋದರೂ ಒಂದೇ. ಬೇರೆ ಮೋಡಗಳೊಂದಿಗೆ ಸೇರಿಕೊ, ಜೊತೆಯಾಗಿ ಅಪರೂಪದ ಪರ್ವತಗಳು, ಮರಗಳಿರುವ ಮಧ್ಯ ಆಫ್ರಿಕಾಕ್ಕೆ ಹೋಗೋಣ!”
ಆದರೆ ಆ ಮೋಡ ಗಾಳಿಯ ಮಾತನ್ನು ಕೆಳಲು ನಿರಾಕರಿಸಿತು. ಹಾಗೆಯೇ ಕೊಂಚ ಕೆಳಗೆ ಜಾರಿ ತಂಗಾಳಿಯೊಂದರ ಜೊತೆಗೂಡಿ ಬಂಗಾರದಂಥ ಮರಳುಗಾಡಿನ ಮೇಲೆ ಮಿಸುಕಾಡತೊಡಗಿತು. ಹಾಗೆಯೇ ಸುಳಿದಾಡುತ್ತಿರುವಾಗ ಒಂದು ಸಣ್ಣ ಮರಳಿನ ಗುಡ್ಡೆ ತನ್ನನ್ನು ನೋಡಿ ಪುಟ್ಟದಾದ ಮುಗುಳ್ನಗೆ ಬೀರಿದ್ದನ್ನು ಕಂಡಿತು.
ಮರಳಿನ ಮೇಲೆ ಬೀಸಿ ಹೋದ ಗಾಳಿಯಿಂದ ಆಗತಾನೆ ಹುಟ್ಟಿತ್ತು ಆ ಮರಳಿನ ಗುಡ್ಡೆ. ಅದನ್ನು ನೋಡಿದ ಕೂಡಲೆ ಮೋಡ ಅದನ್ನು ಪ್ರೀತಿಸಲಾರಂಭಿಸಿತು.
“ನಮಸ್ಕಾರ” ಎಂದಿತು ಮೋಡ. “ಅಲ್ಲಿ ಜೀವನ ಹೇಗಿದೆ?”
“ಸೂರ್ಯ ಮತ್ತು ಗಾಳಿ ನನ್ನೊಂದಿಗೆ ಯಾವಾಗಲೂ ಇರುತ್ತಾರೆ, ಯಾತ್ರಿಕರ ತಂಡಗಳು ಇದೇ ಮಾರ್ಗವಾಗಿ ಚಲಿಸುತ್ತವೆ. ಕೆಲವೊಮ್ಮೆ ಉಷ್ಣತೆ ತೀರ ಹೆಚ್ಚುತ್ತದೆ, ಆದರೂ ಸಹಿಸಿಕೊಳ್ಳಬಹುದು. ಆಗಸದಲ್ಲಿನ ನಿನ್ನ ಬದುಕು ಹೇಗಿದೆ?”
“ನನ್ನೊಂದಿಗೂ ಸೂರ್ಯ ಮತ್ತು ಗಾಳಿ ಇರುತ್ತಾರೆ, ಒಂದು ಒಳ್ಳೆಯ ವಿಷಯವೆಂದರೆ ಆಕಾಶದುದ್ದಕ್ಕೂ ಸಂಚರಿಸಿ ಹೊಸ ಹೊಸ ಜಾಗಗಳನ್ನು ನೋಡಬಹುದು.” ಎಂದಿತು ಮೋಡ.
“ನನ್ನ ಜೀವನ ಬಹಳ ಚಿಕ್ಕದು. ಗಾಳಿಯು ದಕ್ಷಿಣದ ಕಾಡುಗಳಿಂದ ಹಿಂದಿರುಗುತ್ತಿದ್ದಂತೆ ನಾನು ಮರೆಯಾಗುತ್ತೇನೆ. ನನ್ನ ಬಾಳಿಗೆ ಒಂದು ಉದ್ದೇಶವೇ ಇಲ್ಲವೇನೋ ಎಂದು ಭಾಸವಾಗುತ್ತದೆ.”
ಮೋಡ ಹೇಳಿತು – ” ನನಗೂ ಹಾಗೆಯೆ ಅನ್ನಿಸುತ್ತದೆ. ಮತ್ತೊಂದು ಗಾಳಿ ಬೀಸಿದೊಡನೆ ದಕ್ಷಿಣದೆಡೆಗೆ ಚಲಿಸಿ ಮಳೆಯಾಗಿ ಪರಿವರ್ತನೆ ಹೊಂದುತ್ತೇನೆ. ಅದೇ ನನ್ನ ಜೀವನದ ನಿಯತಿ.”
“ನಿನಗೆ ಗೊತ್ತೆ, ಮರಳುಗಾಡಿನಲ್ಲಿ ಇಲ್ಲಿ ನಾವು ಮಳೆಯನ್ನು ಸ್ವರ್ಗಕ್ಕೆ ಹೋಲಿಸುತ್ತೇವೆ. ಮಳೆಯ ಬಗ್ಗೆ ನಾನು ಕಥೆಗಳನ್ನು ಕೇಳಿದ್ದೇನೆ. ನಮ್ಮ ಮೇಲೆ ಮಳೆ ಹೊಯ್ದರೆ ನಾವು ಹುಲ್ಲು ಹೂವಿಗಳಿಂದ ತುಂಬಿರುತ್ತೇವಂತೆ. ಇಲ್ಲಿ ಮಳೆ ಸುರಿವುದೇ ಅಪರೂಪವಾದ್ದರಿಂದ ಅದನ್ನೆಲ್ಲ ನಾನು ಅನುಭವಿಸುತ್ತೇನೊ ಇಲ್ಲವೋ…”
ಮೋಡ ಪ್ರೀತಿಯಿಂದ ನಕ್ಕಿ ಹೇಳಿತು – ” ನಾನು ಬೇಕಿದ್ದರೆ ನಿನ್ನ ಮೇಲೆ ಮಳೆಯಾಗಿ ಸುರಿಯಬಲ್ಲೆ. ನಿನ್ನನ್ನು ನಾನು ಪ್ರೇಮಿಸುತ್ತಿದ್ದೇನೆ, ಇಲ್ಲೇ ನಿನ್ನ ಜೊತೆಗಿರಲು ಆಶಿಸುತ್ತೇನೆ.”
“ನಾನು ಕೂಡ ನಿನ್ನ ನೋಡಿದ ಕ್ಷಣವೇ ನಿನ್ನನ್ನು ಪ್ರೀತಿಸಿಬಿಟ್ಟೆ, ಆದರೆ ನೀನು ಮಳೆಯಾಗಿ ಸುರಿದುಬಿಟ್ಟರೆ ನೀನು ಸಾಯುತ್ತೀಯಲ್ಲವೆ.”
” ಪ್ರೀತಿ ಎಂದಿಗೂ ಸಾಯದು ” ಎಂದಿತು ಮೋಡ. ” ಅದು ಪರಿವರ್ತನೆಗೊಳಗಾಗುತ್ತದೆಯಷ್ಟೆ. ಅದಕ್ಕೂ ಹೆಚ್ಚಾಗಿ ನಾನು ನಿನಗೆ ಸ್ವರ್ಗ ಹೇಗಿರುತ್ತೆ ಎಂದು ತೋರಿಸಬಯಸುತ್ತೇನೆ.”
ಹೀಗೆ ಹೇಳಿ ಆ ಮೋಡ ಮರಳಿನ ಜೊತೆಗಿರಲು ಅದರ ಮೇಲೆ ಮಳೆಯ ಹನಿಗಳನ್ನು ಚಿಮುಕಿಸತೊಡಗಿತು. ಮಾರನೆಯ ದಿನ ಆ ನರಳಿನ ಗುಡ್ಡೆಯ ಮೇಲೆ ಹಸಿರು ಗಿಡಗಳು, ಹೂವುಗಳು ಬೆಳೆಯಲಾರಂಭಿಸಿದವು.
ದಕ್ಷಿಣ ಆಫ್ರಿಕಾದೆಡೆಗೆ ಚಲಿಸುತ್ತಿದ್ದ ಇತರೆ ಮೋಡಗಳು ಇದನ್ನು ನೋಡಿ ಇದು ತಾವು ಹೋಗಬೇಕಿದ್ದ ಕಾಡಿನ ಭಾಗವೆಂದು ತಿಳಿದು ಇದರ ಮೇಲೆ ಮತ್ತಷ್ಟು ಮಳೆ ಸುರಿದವು.
ಇಪ್ಪತ್ತು ವರ್ಷಗಳ ನಂತರ ಆ ಸಣ್ಣ ಮರಳಿನ ಗುಡ್ಡೆ ಮರಳುಗಾಡಿನಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಆಶ್ರಯ ಕೊಟ್ಟು ದಣಿವಾರಿಸುವ ತಾಣವಾಗಿ ಮಾರ್ಪಾಡಾಗಿಬಿಟ್ಟಿತು.

ಇದೆಲ್ಲಾ ಸಾಧ್ಯವಾಗಿದ್ದು ಪ್ರೀತಿಯಿಂದ.
ಒಂದು ದಿನ ಒಂದು ಮೋಡ ಪ್ರೀತಿಸಿತು. ಆ ಪ್ರೀತಿಗೋಸ್ಕರ ತನ್ನ ಪ್ರಾಣವನ್ನೂ ನೀಡಲು ಹಿಂಜರಿಯಲಿಲ್ಲ…..

ಇದು Paulo Coelho ಎಂಬ ಲೇಖಕನ Like a flowing river ಹೆಸರಿನ ಒಂದು ಪುಸ್ತಕದಲ್ಲಿನ ಸಣ್ಣ ಕಥೆ.

ಆಗಿನ ಬೆಂಗಳೂರು ಈಗೆಲ್ಲಿ…?

ಸೆಪ್ಟೆಂಬರ್ 16, 2008

ಹೀಗೆ ಒಂದು ಆರು ದಶಕಗಳ ಹಿಂದಿನ ಬೆಂಗಳೂರನ್ನು ಇಣುಕಿ ನೋಡಲು ಪ್ರಯತ್ನಿಸಿದರೆ ನಮಗೆ ಕಾಣುವುದು ನಮ್ಮ ತಂದೆ ತಾಯಿ ತಾವು ಮಕ್ಕಳಾಗಿದ್ದಾಗ, ಅಜ್ಜಿ ತಾತ ತಮ್ಮ ಯೌವನದಲ್ಲಿ ನೋಡಿರಬಹುದಾದಂಥ ಮಹಾನಗರಿ. ಬೇಸಿಗೆ ತಿಂಗಳುಗಳಲ್ಲೂ ಎ.ಸಿ. ಗಳ ಅವಶ್ಯಕತೆ ಇಲ್ಲದೆ ಬದುಕಬಹುದಾದಂಥ ನಿಜ ಉದ್ಯಾನ ನಗರಿ.

ಹಳೆಯ ಪ್ರಪಂಚಕ್ಕೆ ಸುಸ್ವಾಗತ. ಇತಿಹಾಸದ ಪುಟಗಳಲ್ಲಿ ಕಳೆದು ಹೋಗಿರುವ, ಒಂದಷ್ಟು ತಲೆಮಾರುಗಳು ಹಳೆಯ ಛಾಯಾಚಿತ್ರಗಳು ಇಲ್ಲಿವೆ. ಬನ್ನಿ ಜೊತೆಯಲ್ಲಿ, ಭೂತಕಾಲಕ್ಕೆ ಪಯಣಿಸೋಣ. ಬ್ರಿಟಿಷ್ ರಾಜ್ ನ ದಿನಗಳು, ಆಗ ಬೆಂಗಳೂರು ಒಂದು ಪುಟ್ಟ ಕಂಟೋನ್ಮೆಂಟ್ ಟೌನು.

ಆ ವರ್ಷ ೧೯೪೬.  ಸ್ಥಳ ” ನಮ್ಮ ಬೆಂಗಳೂರು ”

ಈ ಚಿತ್ರದಲ್ಲಿನ ಜಾಗ ನೋಡಿದ್ದೀರ? ನೋಡಿರಬೇಕು, ಇದು ಈಗಿನ ” Brigade Road “. ಎಡಗಡೆ ಕಾಣುವ ಕಟ್ಟಡ ಇನ್ನೂ ನಿಂತಿದೆ. ಆಗ ಅಲ್ಲಿ Ashok Electricals ಮತ್ತು Post Office ಇತ್ತು, ಈಗ ಅದು Lee ಮತ್ತು Louis Philippe ಶೊರೂಮ್.
ರೋಡೇನೂ ದೊಡ್ಡದಾಗಿಲ್ಲ, ಆದರೆ ಗಾಡಿಗಳು ಮತ್ತು ಜನದಟ್ಟಣೆ ಖಂಡಿತ ಜಾಸ್ತಿಯಾಗಿದೆ.

ಇಲ್ಲಿದೆ ಸೌತ್ ಪರೇಡ್ ರೊಡ್. ಈಗ ಇದನ್ನು ಏನೆಂದು ಕರೆಯುತ್ತಾರೆ ಗೊತ್ತೆ? ” M.G.Road “. ಇಲ್ಲಿ ಕಾಣುವ ಕಟ್ಟಡ Higginbothams Bookstore !

ಮೇಲೆ ಕಾಣುತ್ತಿರುವ ರಸ್ತೆ ಹೊಸೂರು ರಸ್ತೆ ಎಂದರೆ ನೀವು ನಂಬುತ್ತೀರ? ಈಗಿನ ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯಕ್ಕೆ ಮನೆಯಾಗಿರುವ ರಸ್ತೆ ಆಗ ಕಂಡದ್ದು ಹೀಗೆ.

ಇದು ಬೆಂಗಳೂರಿನ ಟೌನ್ ಹಾಲ್.

ಈ ಕಲ್ಲು ಕಟ್ಟಡ Oriental Building (ಈಗ L.I.C) , M.G.Road ಮತ್ತು St.Marks Road ನ ಮೂಲೆಯಲ್ಲಿದೆ. ಅಲ್ಲಿ ಒಂದು ಸರ್ಕಲ್ ಇದ್ದದ್ದನ್ನು ನೋಡಬಹುದು. ಇಲ್ಲಿ ಕಾಣುತ್ತಿರುವ ರಸ್ತೆ  ” St.Marks Road “.

ಇದು ಮೇಯೋ ಹಾಲ್. ಈಗ ಕಾಣುವುದಕ್ಕಿಂತ ಬಹಳಷ್ಟು ಚೆಂದವಾಗಿ ಕಾಣುತ್ತದೆ.

ಈ ಕಾರಿನ ನಂಬರ್ ಪ್ಲೇಟ್ ಗಮನಿಸಿದಿರ? ” BAN 565 “, ಅಂದರೆ ೧೯೪೬ ರ ಬೆಂಗಳೂರು ಅಥವ ಅಂದಿನ ಇಡೀ ಮೈಸೂರು ರಾಜ್ಯದಲ್ಲಿ ಸಾವಿರಕ್ಕಿಂತ ಕಡಿಮೆ ಕಾರುಗಳಿದ್ದವು.

೨೪ ವಯಸ್ಸಿನ ನನಗೆ ಆ ದಿನಗಳನ್ನು ನೋಡುವ ಭಾಗ್ಯ ಇರಲಿಲ್ಲ. ನೋಡಿರುವ ಪುಣ್ಯವಂತರು ಈ ಚಿತ್ರಗಳನ್ನು ನೋಡಿ ತಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ಮೆಲುಕು ಹಾಕಿಕೊಂಡು ಆನಂದ ಪಟ್ಟರೆ ನನಗಷ್ಟೆ ಸಮಾಧಾನ.

ಈ ಬ್ಲಾಗನ್ನು ಸೃಷ್ಠಿ ಮಾಡಲು ಈ ಅಪರೂಪದ ಛಾಯಾಚಿತ್ರಗಳನ್ನು ಒದಗಿಸಿದ ನನ್ನ ಮಿತ್ರನಿಗೆ ಅನಂತ ಧನ್ಯವಾದಗಳು.

ಪೂರ್ಣತೆಯನ್ನು ಕಂಡುಕೊಂಡಾಗ

ಸೆಪ್ಟೆಂಬರ್ 15, 2008

ನನ್ನ ಸ್ನೇಹಿತನೊಬ್ಬನಿಗೆ ಹಿಂದೊಮ್ಮೆ ನಾ ಹೇಳಿದ ಮಾತುಗಳನ್ನು ಇಂದು ನೆನಪಿಸಿಕೊಳ್ಳಬೇಕಿದೆ.
ನಾವು ಕೆಲವೊಮ್ಮೆ ನಮ್ಮ ಜೀವನವನ್ನು ಪೂರ್ಣಗೊಳಿಸಲು, ಸಂತೊಷವಾಗಿರಿಸಲು ನಮ್ಮ ಬಳಿ ಇಲ್ಲದ ಕಲವನ್ನು ಪಡೆಯಬೆಕು ಎಂದು ನಂಬಿರುತ್ತೇವೆ. ಅವು ಜನರಾಗಿರಬಹುದು, ವಸ್ತುಗಳಾಗಿರಬಹುದು ಅಥವ ಭಾವನೆಗಳಾಗಿರಬಹುದು. ಆದರೆ ಇದು ಸತ್ಯವಲ್ಲ.
ನಿಜ ಹೇಳಬೇಕೆಂದರೆ ನನ್ನ ಬದುಕಿನಲ್ಲಿ, ಅಥವ ಯಾರೊಬ್ಬರ ಬದುಕಲ್ಲೆ ಆಗಲಿ, ನಮ್ಮ ಬದುಕಿಗೆ ಏನೇನು ಬೇಕೊ, ಬದುಕು ಅವನ್ನೆಲ್ಲೆ ನಮಗೆ ಕೊಟ್ಟಿಯೇ ಇರುತ್ತದೆ.
ಬದುಕಲ್ಲಿ ಏನೋ ಇಲ್ಲ ಎಂದು ನಮಗೆ ಭಾಸವಾದರೆ, ಬಹುಶಃ ಅದು ಬೇಕಿರಲಿಕ್ಕಿಲ್ಲ ಎಂದು ನನ್ನ ಅನಿಸಿಕೆ.
ನಮ್ಮಲ್ಲಿ ಒಂದು ಶೂನ್ಯವಿದೆ, ಮತ್ತೊಬ್ಬರ ಆಗಮನದಿಂದ ಅದು ಪೂರ್ಣಗೊಳ್ಳುತ್ತದೆ ಎಂದು ನಾವೇಕೆ ಅಂದುಕೊಳ್ಳುತ್ತೇವೋ? ಗೊತ್ತಿಲ್ಲ…
ನಮ್ಮಲ್ಲಿ ಪ್ರೇಮ ಇಲ್ಲದಿದ್ದರೆ, ಮತ್ತೊಬ್ಬರಿಗೆ ಅದನ್ನು ನೀಡಲು ನಮಗೆ ಹೇಗೆ ಸಾಧ್ಯವಾಗುತ್ತೆ? ನಾವು ಪ್ರೇಮಕ್ಕಾಗಿ ಹಾತೊರೆಯುತ್ತಿದ್ದರೆ, ನಮ್ಮೊಳಗೆ ಪ್ರೇಮ ಇಲ್ಲ ಎಂದರ್ಥವೇ?
ಮತ್ತೊಬ್ಬರು ಬಂದು ಪ್ರೇಮದ ಧಾರೆಯೆರೆದು ನಮ್ಮ ಹೃದಯವನ್ನು ತುಂಬುತ್ತಾರೆಂಬ ನಿರೀಕ್ಷೆ ನಮ್ಮದೇ? ಅವರು ಹಾಗೆ ಮಾಡಿದರೆ ಅದೇ ಪ್ರೇಮವನ್ನು ಹಿಂದಿರುಗುಸಬಹುದು ಎಂಬುದು ನಮ್ಮ ನಂಬಿಕೆಯೇ? ಇಲ್ಲ, ನಾವು ಪ್ರೇಮಿಸುತ್ತೇವೆ, ಏಕೆಂದರೆ ನಮ್ಮಲ್ಲಿ ಆ ಭಾವನೆ ಮೊದಲೇ ಇರುತ್ತದೆ, ನಮ್ಮ ಪ್ರೇಮ ತಿರಸ್ಕಾರಕ್ಕೊಳಗಾದರೆ ಶೋಕಸಾಗರದಲ್ಲಿ ಮುಳುಗಿ ಬದುಕು ಅಪೂರ್ಣ ಎಂಬ ನಿರ್ಧಾರಕ್ಕೆ ಬರುವುದು ಉಚಿತವಲ್ಲ.
ನಮ್ಮ ಹೃದಯದಲ್ಲಿ ಪ್ರೇಮವೆಂಬ ಭಾವನೆಯಿದ್ದು, ನಮ್ಮಲ್ಲಿ ನಾವು ಪೂರ್ಣತೆಯನ್ನು ಕಂಡುಕೊಂಡಾಗ ಮಾತ್ರ ಆ ಪ್ರೇಮ ನಮ್ಮ ಬಳಿ ಬಂದಾಗ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
ಇಲ್ಲದಿದ್ದರೆ ಪ್ರೇಮ ನಮ್ಮ ಎದೆಯ ಬಾಗಿಲನ್ನು ತಟ್ಟಿದಾಗ ಅದನ್ನು ಗುರುತಿಸುವಲ್ಲಿ ನಾವು ವಿಫಲರಾಗಿಬಿಡುತ್ತೇವೆ…..

ಎಲ್ಲಿ ಮರೆಯಾದೆ?

ಸೆಪ್ಟೆಂಬರ್ 14, 2008

ಕತ್ತಲಲಿ ತೊಳಲಾಡುತ್ತಿದ್ದ ನನ್ನ ಬದಿಕನಲ್ಲಿ ನೀ ಕಾಣಿಸಿಕೊಂಡೆ, ಕೈ ಹಿಡಿದು ಬೆಳಕಿನತ್ತ ನೆಡೆಸಿದೆ. ಬದುಕಿಗೊಂದು ಹೊಸ ಅರ್ಥ ನೀಡಿದೆ…
ನೀ ಇಲ್ಲದಿದ್ದರೆ ಇಷ್ಟು ದಿನ ಬದಿಕುತ್ತಿದ್ದೆನ? ಗೊತ್ತಿಲ್ಲ…
ಒಂಟಿತನದಿಂದ ಬೇಸತ್ತಿದ್ದ ನನಗೆ ಜೀವದ ಗೆಳತಿಯಾದೆ. ಬದುಕಲು ಸ್ಫೂರ್ಥಿನೀಡಿದೆ. ಮರುಳುಗಾಡಿನಲ್ಲಿ ಅಲೆಯುತ್ತ ಸೋತವನಿಗೆ ನೀರು ಕಂಡ ಹಾಗೆ…
ನಿನ್ನ ಜೊತೆ ಕಳೆದ ಆ ಕ್ಷಣಗಳು ನನ್ನ ಕಣ್ಣಿಗೆ ಕಟ್ಟಿದಂತಿದವೆ. ಅವನ್ನು ಮರೆಯಲು ಸಾಧ್ಯವೇನೇ? ತುಟಿಯಂಚಿನ ನಿನ್ನ ಆ ತುಂಟ ನಗೆಯನ್ನು ನೋಡಲು ಮನದ ದುಗುಡವೆಲ್ಲ ದೂರಾಗಿ ಜೀವಕ್ಕೆ ಹೊಸ ಉತ್ಸಾಹ ಬರುತ್ತಿತ್ತು.
ಕ್ಲಾಸ್ ರೂಮಿನಲ್ಲಿ ಇಬ್ಬರೆ ಕೂತು ಮಾತಾಡುತ್ತಿದ್ದೆವಲ್ಲ, ಅದೆಷ್ಟು ಮಾತುಗಳಿದ್ದವೊ…
ಇಂದೇನಾಯಿತೆ ಹುಡುಗಿ, ಮಾತುಗಳೆಲ್ಲ ಮುಗಿದು ಹೋದವೇ…? ಏತಕೀ ಮೌನ… ನಾ ಕಂಡದ್ದು ಬರೀ ಮರೀಚಿಕೆಯೆ? ನಿನ್ನ ನೊಡಿ, ನಿನ್ನೊಂದಿಗೆ ಮಾತಾಡಿ ತಿಂಗಳುಗಳೆ ಕಳೆದಿವೆ, ಎಲ್ಲಿ ಮರೆಯಾದೆ?
ನಿನ್ನ ಆ ನಗು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ, ಜೀವಕ್ಕೆ ಜೀವದಂತಿದ್ದ ಈ ಗೆಳೆಯ ನಿನಗಿಂದು ನೆನಪಾಗುತ್ತಿಲ್ಲವೇ…?
ಈಗ ನೀ ಎಲ್ಲಿರುವೆಯೋ ತಿಳಿಯದು, ಎಲ್ಲಿದ್ದರೂ ಚೆನ್ನಾಗಿದ್ದರೆ ನನಗಷ್ಟೆ ಸಮಾಧಾನ, ಎಂದಾದರೊಮ್ಮೆ ಈ ಗೆಳೆಯನ್ನ ನೆನೆಪಿಸಿಕೊಳ್ತಿಯ ಎಂದು ನಂಬಿದ್ದೇನೆ… ನಿನಗಾಗಿ ಕಾಯುತ್ತ ಕುಳಿತಿದ್ದೇನೆ…..